Skip to main content
ಶಿಕ್ಷಕ —ರಾಷ್ಟ್ರದ ಶಿಲ್ಪಿ
ಶಿಕ್ಷಕ, ಗುರು, ಅಧ್ಯಾಪಕ ಪ್ರಪಂಚದಲ್ಲಿ ಪ್ರತಿಕಾಲದಲ್ಲಿಯೂ ಹತ್ತಾರುಸಾವಿರ ಶಿಕ್ಷಕರಿರುತ್ತಾರೆ. ಆದರೆ ಕೆಲವೇ ಕೆಲವು ಶಿಕ್ಷಕರು ಜಗಮಾನ್ಯರಾಗುತ್ತಾರೆ, ಏಕೆ ಹಾಗೆ ಮಾನ್ಯರಾಗುವುದಿಲ್ಲ. ಯಾರು ತಮ್ಮ ವಿದ್ಯಾರ್ಥಿಗಳನ್ನು ಕನಿಷ್ಠ ಪಕ್ಷ ತಮ್ಮ ಮಕ್ಕಳಷ್ಟಾದರೂ ಪ್ರೀತಿ ಮಾಡುತ್ತಾರೋ ಅವರೆಲ್ಲ ತಮ್ಮ ಶಿಷ್ಯರ ಮನದಲ್ಲಿ ಚಿರಂಜೀವಿಗಳಾಗುತ್ತಾರೆ. ಇಂಗ್ಲೀಷಿನಲ್ಲಿ ಒಂದು ಮಾತಿದೆ. "I hear, I forget:I see, I remember :I do, I understand "ನಾನು ಕೇಳಿದ್ದನ್ನು ಮರೆಯುತ್ತೇನೆ, ನೋಡಿದ್ದನ್ನು ನೆನಪಿನಲ್ಲಿಡುತ್ತೇನೆ, ಮಾಡಿದ್ದನ್ನು ಅರ್ಥಮಾಡಿಕೊಳ್ಳುತ್ತೇನೆ. "ಮಕ್ಕಳ ಮನದಲ್ಲಿ ನಿಶ್ಚಿತವಾಗಿ ಉಳಿಯುವ, ಕಲಿತದ್ದನ್ನು ಅರ್ಥ ಮಾಡಿಕೊಳ್ಳುವ ಕಲಿಕಾ ಸಾಮಗ್ರಿಗಳನ್ನು ಶಿಕ್ಷಕರು ಅಣಿಮಾಡಿ ಇಟ್ಟುಕೊಂಡು ತರಗತಿಗಳಿಗೆ ಹೋಗಬೇಕು.. ಅಮೇರಿಕದಲ್ಲಿ ಒಬ್ಬ ಶಿಕ್ಷಕಿ. ಚಿಕ್ಕ ವಯಸ್ಸು. ಪ್ರತಿ ತರಗತಿಗೆ ಆಕೆಯು ಮಾಡಿಕೊಳ್ಳುತ್ತಿದ್ದ ತಯಾರಿ, ಕಲಿಕಾ ಸಾಮಗ್ರಿಗಳನ್ನು ಜೋಡಿಸಿಕೊಳ್ಳುವ ತಯಾರಿ ಅನನ್ಯ. ತರಗತಿಗೆ ಗಂಟೆ ಆಗುವ ಮುನ್ನ ಆಕೆ ಎಲ್ಲಾ ಸಾಮಾನುಗಳನ್ನು ಹೊತ್ತುಕೊಂಡು "ಓಹ್ ಗಂಟೆಯಾಗಲು ಇನ್ನು ಮೂವತ್ತೆ ಸೆಕಂಡ್ ಇದೆ"ಎನ್ನುತ್ತ ಮೊಗಸಾಲೆಯಲ್ಲಿ ಓಡುವದನ್ನು ನೋಡಬೇಕು. ಆಕೆ ಎಂದಿಗೂ ತರಗತಿಗೆ ಒಂದು ನಿಮಿಷ ತಡವಾಗಿ ಹೋದವಳಲ್ಲ. ಆಕೆ ಹೇಳುತ್ತಿದ್ದಳು. "ನಾನು ಒಂದು ನಿಮಿಷ ತಡಮಾಡಿ ಹೋದರೆ ನಲವತ್ತು ನಿಮೀಷ ವ್ಯರ್ಥವಾದಂತೆ. ಯಾಕೆಂದರೆ ತರಗತಿಯಲ್ಲಿ ನಲವತ್ತು ಮಕ್ಕಳಿದ್ದಾರಲ್ಲ! ಪ್ರತಿಯೊಬ್ಬರಿಗೂ ಒಂದು ನಿಮಿಷ ವ್ಯರ್ಥವಲ್ಲವೇ? "ಆಕೆಯ ತರಗತಿಗಳನ್ನು ಯಾವ ವಿದ್ಯಾರ್ಥಿಯೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಆರೋಗ್ಯ ಸರಿ ಇಲ್ಲದ ವಿದ್ಯಾರ್ಥಿ ಕೂಡ ಕೇವಲ ಆ ಶಿಕ್ಷಕಿಯ ತರಗತಿಗಾದರೂ ಬಂದು ಹೋಗುತ್ತಿದ್ದ. ಒಂದು ಬಾರಿ ಒಬ್ಬ ಹುಡುಗಿ, ಆಕೆಗೆ ನೂರಾಮೂರು ಡಿಗ್ರಿ ಜ್ವರವಿತ್ತಂತೆ. ಆಕೆ ಮಾತ್ರೆ ತೆಗೆದುಕೊಂಡು ಈ ಶಿಕ್ಷಕಿಯ ತರಗತಿಗೆ ಬಂದಿದ್ದಳು. ಆ ತರಗತಿ ಮುಗಿದ ತಕ್ಷಣ ಮನೆಗೆ ಹೊರಟಳು. ಇನ್ನೂಬ್ಬ ಶಿಕ್ಷಕರು ಕೇಳಿದರು. "ನಿನಗೆ ಆರೋಗ್ಯ ಸರಿ ಇಲ್ಲಾ, ಯಾಕೆ ಬಂದೆ ಶಾಲೆಗೆ? "ಆಕೆ ನನ್ನನ್ನು ಆಶ್ಚರ್ಯದಿಂದ ನೋಡುತ್ತ "How can I miss her class? She is a magician "ಎಂದಳು. "ಆಕೆಯ ತರಗತಿಯನ್ನು ಹೇಗೆ ತಪ್ಪಿಸಿಕೊಳ್ಳಲಿ? ಆಕೆ ಒಬ್ಬ ಮಾಂತ್ರಿಕಳು".ನನ್ನ ಪ್ರಕಾರ ಯಾವುದೇ ಶಿಕ್ಷಕನಿಗೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಬೇಕಿಲ್ಲ. ಆಕೆಯ ಹೆಸರು ಮೇರಿ ಎಲ್ಲೇನ್ ವೀಮರ. ಮಕ್ಕಳ ಹೃದಯದಲ್ಲಿ ಕಲಿಯುವಿಕೆಯ ಹಸಿವು ಹುಟ್ಟಿಸಿ ಕುತೋಹಲವನ್ನು ಕಟ್ಟುತ್ತಾರೆ. ಮುಂದಿನ ಸಮರ್ಥರನ್ನು ಸೃಷ್ಟಿ ಮಾಡುತ್ತಾರೆ. ಇದು ಶಿಕ್ಷಕನಾದವನ ಮೊದಲ ಮೆಟ್ಟಿಲು. ಶಿಕ್ಷಕ ಸರಿಯಾದ ಸಮಯಕ್ಕೆ ಶಾಲೆಗೆ ಹೋಗಿ ವಿಷಯದ ತಯಾರಿಯಿಂದ ತರಗತಿಗೆ ಹೋದಾಗ ಮಕ್ಕಳ ಮನದಲ್ಲಿ ವಿಷಯ ಅಭಿನೀತಗೊಂಡಾಗ ಶಿಕ್ಷಕನ ಪಾಠ ಸಾರ್ಥಕ್ಯ ಪಡೆಯುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಕನ ಮುಖದಲ್ಲಿ ಸಂತೋಷ, ಸಂಭ್ರಮ ಹೊಳೆಯುತ್ತಿರಬೇಕು. ಆಗ ರಾಷ್ಟ್ರ ನಿರ್ಮಾತ್ರ ಶಿಕ್ಷಕನಾಗುತ್ತಾನೆ. Teacher is creation of nation.
Popular posts from this blog
Comments
Post a Comment